ಕಟ್ಟುಪಟ್ಟಿಗಳು, ಪಟ್ಟಿಕಟ್ಟುವಿಕೆ : ಹುಣ್ಣು, ಗಾಯಗಳಿಗಾಗಿ ಇಲ್ಲವೇ ಊನವಾದ ಅಂಗಗಳನ್ನು ಬಿಗಿದು ಕಟ್ಟಲು ಬರುವ ಬಟ್ಟೆಯ ಪಟ್ಟಿ ಇಲ್ಲವೇ ಚೂರುಪಟ್ಟಿಗಳಿವು (ಬ್ಯಾಂಡೇಜಸ್), ಗಾಯ ಕಟ್ಟುಗಳನ್ನೋ (ಡ್ರೆಸಿಂಗ್ಸ್‌) ದಬ್ಬೆ ಕಟ್ಟುಗಳನ್ನೋ (ಸ್ಪಿಂಟ್ಸ್‌) ಒಂದೆಡೆ ಇರಿಸಿದ್ದಂತೆ ಇರಿಸಲೋ, ಮೈಯ ಒಂದು ಭಾಗಕ್ಕೆ ಊರೆ ಕೊಡಲೋ ಆಲುಗಾಡದಂತೆ ಇರಿಸಲೋ ಕೋಶವನ್ನು ಮುಚ್ಚಿಹಾಕಲೋ ರಕ್ತ ಸುರಿವುದನ್ನು ನಿಲ್ಲಿಸಲೋ ಇಲ್ಲವೇ ತಡೆಗಟ್ಟಲು ಒತ್ತಿ ಹಿಡಿಯಲೋ ಕಟ್ಟುವುದುಂಟು. ಕಟ್ಟುಪಟ್ಟಿಗಳನ್ನು ಕಟ್ಟಿದ ಮೇಲೆ ತುದಿಗಳನ್ನು ಗಂಟು ಹಾಕುವಾಗ ಸಮಗಂಟನ್ನು (ರೀಫ್ನಾಟ್) ಹಾಕಿದರೆ ಭದ್ರವಾಗಿರುವುದು.

ಕಟ್ಟುಪಟ್ಟಿಗಳಲ್ಲಿ ಹಲವಾರು ಬಗೆಗಳಿವೆ: ತ್ರಿಕೋನದ್ದು ಸುರುಳಿ ಇಲ್ಲವೇ ನಿರಿಗಟ್ಟಿದ ಜಾಳರಿವೆ (ಗಾಜ), ನಾಲ್ಕು ಬಾಲದ್ದು, ಹಲವು ಬಾಲಗಳದ್ದು, ಹಿಗ್ಗಿ ಕುಗ್ಗುವಂತಹದು, ಅಂಟು ಕಟ್ಟುಪಟ್ಟಿ, ಗಚ್ಚುಗಿರಿ (ಪ್ಲಾಸ್ಟರ್) ಹಿಟ್ಟುಗಳನ್ನು ಹಾಕಿದ್ದು, ರಬ್ಬರಿನದು ಮುಂತಾದುವು. ವೈದ್ಯಚಿಕಿತ್ಸೆಯಲ್ಲಿ ಒಂದೊಂದು ತೆರನಾಗಿ ಕಟ್ಟಲೂ ಬೇರೆ ಬೇರೆ ಹೆಸರುಗಳಿವೆ. ಒಂದೊಂದು ಬೆರಳಿಗೂ ಕೈಗೂ ಸುರುಳಿ ಸುತ್ತಿದಂತೆ ಕಟ್ಟಲು ಕೈಸುತ್ತುಪಟ್ಟಿ ಎಂದಿದೆ. 

ಕಟ್ಟುಪಟ್ಟಗಳನ್ನು ಹಲವಾರು ಕಟ್ಟಬೇಕಾದ ಎಲ್ಲ ತುರ್ತಿನ ಹೊತ್ತುಗಳಲ್ಲೂ ಚಿನ್ನಾಗಿ ನೆರವಾಗುವುದು ತ್ರಿಕೋನ ಕಟ್ಟುಪಟ್ಟಿ. ಇದನ್ನು ತಯಾರಿಸುವುದೂ ಕಟ್ಟುವುದೂ ಸುಲಭ. 90-100 ಸೆಂಮೀ ಉದ್ದದ ಅಂಚಿರುವ ಮಸ್ಲಿನ್, ತೆಳುಬಟ್ಟೆ, ಜಾಳರಿವೆಗಳ ಚೌಕವನ್ನು ಕೊಯ್ಮೂಲೆಯಾಗಿ ಕತ್ತರಿಸಿ ಎರಡು ತ್ರಿಕೋನ ಕಟ್ಟುಪಟ್ಟಗಳನ್ನು ಪಡೆಯಬಹುದು. ಕಟ್ಟಿದೆಡೆ ಇದು ಜಾರದಂತೆ ಉಳಿದಿರುತ್ತದೆ. ಮೈಯಲ್ಲಿ ಎಲ್ಲಿ ಬೇಕಾದರೂ ಕಟ್ಟಲು ಅನುಕೂಲಕರ. ಕಟ್ಟಿದ ಮೇಲೆ ರಕ್ತನಾಳಗಳನ್ನಾಗಲೀ ಮೆತ್ತನೆಯ ಭಾಗಗಳಿಂದಾಗಲೀ ಅಪಾಯವಿಲ್ಲ. ಮಡಿಸದ ತ್ರಿಕೋನ ಕಟ್ಟುಪಟ್ಟಿಯನ್ನು ತೋಲಿನ ತೂಗುಪಟ್ಟಿಯಾಗೂ (ಸ್ಲಿಂಗ್) ತಲೆ, ಕೈ, ಪಾದಗಳ ಮುಚ್ಚಿಗೆಯಾಗೂ ಕಟ್ಟಬಹುದು. ಮೈಯಲ್ಲಿ ಹಲವು ಭಾಗಗಳಲ್ಲಿ ಕಟ್ಟಲು ಬರುವಂತೆ ಇದನ್ನು ಬೇರೆ ಬೇರೆ ಅಗಲಕ್ಕೆ ಮಡಿಸಿಕೊಳ್ಳಬಹುದು. 3-4 ಬಾರಿ ಮಡಿಸಿದಾಗ ಆಗುವ ನೀಳಮಡಿಕೆ (ಕ್ರವಾಟ್) ಕಟ್ಟುಪಟ್ಟಿಯನ್ನು ತೂಗುಪಟ್ಟಿಯಾಗೂ ಕಣ್ಣು, ಕಿವಿ, ಅಂಗೈ ಅಂಗಾಲುಗಳ ಮುಚ್ಚಿಗೆಯಾಗೂ ಕಟ್ಟಬಹುದು, ಶಸ್ತ್ರವೈದ್ಯಕ್ಕೆ ತಕ್ಕನಾದ ಜಾಳರಿವೆಯಿಂದ ತಯಾರಾಗಿ ಜೀವಿಮಡಿಯಾಗಿದ್ದರೆ (ಸ್ಟರಿಲೈಸ್ಡ್‌) ಕಟ್ಟುಪಟ್ಟಿಯನ್ನು ಮದ್ದು, ದ್ರಾವಣ, ಮುಲಾಮುಗಳನ್ನು ಹಾಕಿಯೋ ಇಲ್ಲದೆಯೋ ನೇರವಾಗಿ ಗಾಯದ ಮೇಲೆ ಬಿಗಿಸಿ ಕಟ್ಟಬಹುದು. ಆಸ್ಪತ್ರೆಯಲ್ಲಿ ಸಾಮಾನ್ಯ ಬಳಕೆಯಲ್ಲಿ ಇರುವವು ಇವೇ. ಅರಳೆ ಇಲ್ಲವೇ ಮಸ್ಲಿನ್ನಿಂದಾದವು ಜಾಳರಿವೆಯಿಂದ ಮಾಡಿದವಕ್ಕಿಂತ ಬಲವಾಗಿರುದರಿಂದ ಒತ್ತಿ ಹಿಡಿಯಲೂ ಊರೆ ಕೊಡಲೂ ಒಳ್ಳೆಯವು.

ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬಳಸುವ ಸುರುಳಿ ಕಟ್ಟುಪಟ್ಟಿ ಸು. 3-15 ಸೆಂಮೀ ಅಗಲವೂ ಮೀಟರುಗಳ ಉದ್ದವೂ ಸುರುಳಿಯಾಗಿರುವುದು. ಇದನ್ನು ಮಸ್ಲಿನ್, ಫ್ಲಾನಲ್, ಜಾಳರಿವೆಗಳಿಂದ ಮಾಡಿರಬಹುದು. ಜಾಳರಿವೆಯವೇ ಹೆಚ್ಚು ಬಳಕೆಯಲ್ಲಿವೆ. ಸಾಮಾನ್ಯವಾಗಿ ಇವನ್ನು ಸುತ್ತ ಸುತ್ತಿ ಕಟ್ಟಬೇಕು. ಆಸ್ಪತ್ರೆಗಳಲ್ಲಿ ದಿನವೂ ಬಹಳ ಕಟ್ಟುಪಟ್ಟಿಗಳನ್ನು ತಯಾರಿಸಿ ಸುರುಳಿ ಸುತ್ತಿಡಲು ಸುತ್ತುರುಳೆಯನ್ನು ಬಳಸುವುದುಂಟು, ಕಟ್ಟುಪಟ್ಟಿಯನ್ನು ಬಿಚ್ಚಿದ ಕೂಡಲೇ ಸುರಳಿ ಸುತ್ತಿಟ್ಟರೆ ಮತ್ತೆ ಬಳಸಲು ಅನುಕೂಲ. ಯಾವ ಅವಯವವನ್ನೇ ಆಗಲಿ ವೈದ್ಯ ಹೇಳಿದ ಹೊರತು ಕೆಳಗೆ ಇಳಿಬಿಟ್ಟು ಕಟ್ಟುಪಟ್ಟಿ ಸುತ್ತಬಾರದು. ಕೆಳದವಡೆ, ತಲೆ, ಮೊಣಕ್ಕೆ, ಮೊಣಕಾಲುಗಳ ಪೆಟ್ಟುಗಳಾದಾಗ 15-20 ಸೆಂಮೀ ಅಗಲ, 2-3 ಮೀ ಉದ್ದದ ಚೌಕನೆಯ ನಾಲ್ಕೂ ಬಾಲದ ಕಟ್ಟುಪಟ್ಟಿಯು ಕಟ್ಟಲು ಅನುಕೂಲ. ಹೀಗೇ ಹಲವು ಬಾಲಗಳ ಕಟ್ಟುಪಟ್ಟಿಯನ್ನು ಮುಖ್ಯವಾಗಿ ಹೊಟ್ಟೆ, ಬೆನ್ನುಗಳಿಗೆ ಕಟ್ಟಿ ಬಿಗಿಸಬಹುದು, ಹೆರಿಗೆಯಾದ ಮೇಲೆ ಬಾಣಂತಿಗೆ ಇಂಥದನ್ನು ಕಟ್ಟುವುದುಂಟು. ಹಲವು ತೆರನ ಉದ್ದೇಶಗಳಿಗಾಗಿ ಮೈಯಲ್ಲಿ ಹಲವೆಡೆ ಬಿಗಿಸುವ ಕಟ್ಟುಪಟ್ಟಿಗಳಿಗೆ ಬೇರೆ ಬೇರೆ ಹೆಸರುಗಳಿವೆ. ಉದಾಹರಣೆಗಳಿವು: 8 ಗುರುತಿನ ಎಸ್ಮಾರ್ಕನ ಕಟ್ಟುಪಟ್ಟಿ; ಒಂದು ಭಾಗದ ಸುತ್ತಲೂ ಸುತ್ತುವ ಸುತ್ತುಕಟ್ಟುಪಟ್ಟಿ ; ಕೈಸುತ್ತು ಪಟ್ಟಿ ; ಅರೆಕೈ ಸುತ್ತುಪಟ್ಟಿ, ಕೈ ಕಟ್ಟುಪಟ್ಟಿಗಳು ; ಮುರಿದ ಕೀಲಿಕ (ಕ್ಲಾವಿಕಲ್) ಮೂಳೆಗೆ ಒತ್ತಿಕಟ್ಟುವ ಡಿಸಾಲ್ಟನ ಕಟ್ಟುಪಟ್ಟಿ; ಕೋಸೆ, ಒತ್ತು, ತೂಗು, ಹಿಂದುಮುಂದು, ಸುರುಳಿ, ಹಿನ್ಸುರುಳಿ. ಕಟ್ಟುಪಟ್ಟಿಗಳು; ಖಿ ಆಕಾರದ ಕಟ್ಟುಪಟ್ಟಿ; ತೋಳೋ ತೊಡೆಯೋ ಮೈಗೆ ಕೂಡುದವೆಡೆಯಲ್ಲಿ ಗಿ ಆಕಾರದಲ್ಲಿ ಸುರುಳಿ ಮೇಲೆ ಸುರುಳಿ ಸುತ್ತುವ ತೆನೆಪಟ್ಟಿ (ಸ್ಪೈಕ). ಕೆಲವು ಗೊತ್ತಾದ ಕೆಲಸಗಳಿಗಾಗಿ ಕೆಲವು ಹೆಚ್ಚಿನ ವಸ್ತುಗಳನ್ನು ಒಳಸೇರಿಸಿದ ಕಟ್ಟುಪಟ್ಟಿ ತಯಾರಿಸುವುದುಂಟು. ಪ್ಯಾರಿಸ್ಸಿನ ಗಚ್ಚುಗಿರಿ ಹಾಕಿರುವ ಕ್ರಿನೋಲೀ ಸುರುಳಿ ಕಟ್ಟುಪಟ್ಟಿ; ರಟ್ಟಿನಂತೆ ಗಟ್ಟಿನಂತೆ ಗಟ್ಟಿಯಾಗಿರುವ ಸಿಲಿಕ, ಡೆಕ್ಸ್‌ಟ್ರಿನ್, ಗಂಜಿಯಲ್ಲಿ ಅದ್ದಿದ ಕಟ್ಟುಪಟ್ಟಿಗಳು; ಉದ್ದುದ್ದಕ್ಕಾಗಿ ರಬ್ಬರು ಎಳೆಗಳನ್ನು ನೇಯ್ದಿರುವ ಕೊಂಕುಸಿರಗಳನ್ನು (ವೆರಿಕೋಸ್ ಮೆಯ್ನ್‌ಸ್) ಅದುಮಿಡುವ ಕಟ್ಟುಪಟ್ಟಿಗಳೇ ಮುಂತಾದವು ಇಂಥವು.                                                     	(ಪಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ